ಢಾಣಾ ಡಂಗುರ

ಸಂಪದದಲ್ಲಿ ಮೊದಲು

ಕಳೆದ ಭಾನುವಾರ, ಕೆಲ್ಸ, ಜೀವನದ ಮಧ್ಯ ತಲೆ ಕೆಡ್ಸಕೊಂಡು ಇದ್ದಾಗ ಸ್ನೇಹಿತರೊಬ್ರು ಫೋನಾಯಿಸಿ ರಂಗಾಯಣಕ್ಕೆ ನಾನು ಹೋಗೇ ಇಲ್ಲ, ಸಂಜೆ ಹೋಗೋಣ ಅಂತಿದ್ದೀನಿ ಅಂದ್ರು. ಸರಿ, ನಾನು ಬರ್ತೀನಿ ಅಂದೆ. ಸಂಜೆ ಹೊತ್ತಿಗೆ ಮತ್ತೊಬ್ಬ ಸ್ನೇಹಿತ ಬಂದು ನಾನು ಬರ್ತೀನಿ, ಆದ್ರೆ ಈಗ್ಲೇ ಹೋಗ್ಬೇಕು ಕುಕ್ಕರಹಳಳಿ ಕೆರೆ ಸುತ್ತ ಒಂದು ವಾಕ್ ಮಾಡಿ ಹಾಗಿಂದಾನೇ ಬರ್ತೀನಿ ಅಂದ್ರು.

ಸರಿ, ನಾನೂ ವಾಕೋಣವೆಂದು ಹೊರಟೆ. ಒಂದರ್ಧ ಘಂಟೆಯಲ್ಲೆ ಇಬ್ಬರು ಕೆರೆ ಪ್ರದಕ್ಷಿಣೆ ಮುಗಿಸಿ, ರಂಗಾಯಣದ “ಭೂಮಿಗೀತ”ಕ್ಕೆ ಹೋದ್ವಿ. ಅಲ್ಲಿ ನಮ್ಮ ಮತ್ತೊಬ್ಬ ಸ್ನೇಹಿತ ಟಿಕೆಟ್ಗಳನ್ನು ತೊಗೊಂಡಿದ್ರು.

ಸೋಜಿಗ ಅಂದ್ರೆ ನಮಗ್ಯಾರಿಗೂ ಅಂದು ಯಾವ ನಾಟಕ ಅಂತಾನು ಗೊತ್ತಿರಲಿಲ್ಲ. ಹೊರಗೊಂದ್ ದೊಡ್ಡ ಬ್ಯಾನರ್ ಮೇಲೆ ರಂಗಾಯಣದ ಗ್ರೀಷ್ಮ ರಂಗೋತ್ಸವ ಅಂತ ಬರೆದದ್ದು ಮಾತ್ರ ಕಾಣಿಸ್ತು. ಟಿಕೆಟ್ ಕೊಂಡಾಗ ನಾಟಕದ ಬಗ್ಗೆ ಒಂದು ಪಾಂಪ್ಲೆಟ್ ಕೊಟ್ರು. ಅದ್ರಲ್ಲಿ ಓದ್ದಾಗ ಗೊತ್ತಾಗಿದ್ದು ಯಾರೋ ಸುಳ್ಯದ ಮಕ್ಕಳು ಮಾಡ್ತಿರೋ ನಾಟಕ – ಢಾಣಾ ಡಂಗುರ – ವೈದೇಹಿಯವರು ಬರ್ದಿರೋದು ಅಂತ.

ನಾವು – ನಾಟಕ ಮಕ್ಳು ಮಾಡ್ತಿರೋದು – ಹೇಗಿರತ್ತೋ ಏನೋ ಅಂತ ಅನ್ಕೊಂಡೆ ಒಳಗ್ ಹೋಗಿ ಕೂತ್ವಿ. ಹೀಗೆ ಯೋಚನೆ ಮಾಡಕ್ಕೆ ನಮ್ಮ ನಮ್ಮದೇ ಶಾಲಾ ಸಮಯದಲ್ಲಿ ಆಡುತ್ತಿದ್ದ ನಾಟಕಗಳ ಜ್ಞಾಪಕ :-) ಸರಿ ೬:೩೦ಕ್ಕೆ ಸರಿಯಾಗಿ ಶುರುವಾಗೇ ಹೋಯಿತು ಮಕ್ಳೆಲ್ಲಾ ಕುಣೀತಾ ಬಂದ್ರು, ಅವರ ಹಿಂದೆ ಒಂದ್ ಮಗು ಡಂಗುರ ಇಟ್ಕೊಂಡು ಬಂದು ಶುರುನೇ ಮಾಡ್ಬಿಡ್ತು “ಕೇLrಅಪ್ಪೋ ಕೇಳಿ…” ಅಂತ.

ಅದರ ನಂತರ ಹೇಗೆ ಸಮಯ ಹೋಯ್ತೋ ಗೊತ್ತೇ ಆಗ್ಲಿಲ್ಲ. ನಾವೆಲ್ಲ ನಕ್ಕೂ ನಕ್ಕೂ ಸುಸ್ತಾಗೋ ಹೊತ್ತಿಗೆ ನಾಟಕ ಮುಗಿದೇ ಹೋಯ್ತು. ನಾಟಕದುದ್ದಕ್ಕೂ ಮಕ್ಕಳು ಪ್ರದರ್ಶಿಸಿದ ಕೌಶಲ್ಯ, ವರ್ಚಸ್ಸು ಮತ್ತವರ ಕೈಚಳಕ ನಿಜಕ್ಕೂ ಅಚ್ಚರಿ ಮೂಡಿಸಿತು. ಹಾಗೆನೆ ವೈದೇಹಿಯವರ ಕಥೆ ಬಹಳ ಮೆಚ್ಚುವಂತಹದ್ದು.

ಪ್ರೈಮೆರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಕೈಯ್ಯಲ್ಲಿ ಇಷ್ಟು ಚೆನ್ನಾಗಿ ನಾಟಕ ಮಾಡಿಸಿದ ಜೀವನರಾಂ ಸುಳ್ಯರವರಿಗೆ ನಾವೆಲ್ಲ ಧನ್ಯ. ನಾಟಕದ ಕೊನೆಯಲ್ಲಿ ಪಾತ್ರಮಾಡಿದ್ದ ಮಕ್ಕಳನ್ನು ಪರಿಚಯ ಮಾಡಿಸಿಕೊಟ್ಟ ಸುಳ್ಯ ಅವರು ಹೇಳಿದ್ದು “ಹವ್ಯಾಸಕ್ಕೆ ನಾಟಕ ಮಾಡಲು, ಕೆಟ್ಟು ಹೋಗುತ್ತಾರೆ ಅನ್ನುವ ಕಾರಣಕ್ಕಾಗಿ ಮಕ್ಕಳನ್ನು ಕಳುಹಿಸದ ಪೋಷಕರಿಗೆ ಈ ಮಕ್ಕಳು ಅಪವಾದ. ಇವರೆಲ್ಲಾ ಈ ನಾಟಕದ ಜೊತೆಯಲ್ಲೆ ಹತ್ತು ಹಲವಾರು ವಿದ್ಯೆಗಳನ್ನು ಕಲೆತ್ತಿದ್ದಾರೆ, ಶಾಲೆಯಲ್ಲೂ ಕೂಡ ತುಂಬಾ ಬುದ್ಧಿವಂತರಾಗಿದ್ದಾರೆ” ಅಂತ.

ನಿಜ. ನಾವು ನೋಡಿದ ಹಾಗೆ ಈ ನಾಟಕ ಮಾಡುತ್ತಾ, ಈ ಮಕ್ಕಳೆಲ್ಲ ಎಷ್ಟು ವೈವಿಧ್ಯ ಕಲೆಗಳನ್ನ್ನೂ, ಬದುಕಲು ಬೇಕಿರುವ ಧೈರ್ಯ ಸಾಹಸಗಳನ್ನೂ ಕಲೆತ್ತಿದ್ದಾರೆ ಅಂತ ತಿಳಿಯುತ್ತೆ. ಈ ನಾಟಕ ಮತ್ತೆಲ್ಲಾದರು ಪ್ರದರ್ಶನಕ್ಕೆ ಬಂದರೆ ದಯವಿಟ್ಟು ತಪ್ಪದೆ ಹೋಗಿ ಅವರನ್ನು ಪ್ರೋತ್ಸಾಹಿಸಿ.

ಈ ನಾಟಕದ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ